ಕ್ರೈಸ್ತ ಆರಾಧನಾ ವಿಧಿ

	ಧರ್ಮಸಭೆ (ಚರ್ಚು) ನಿರೂಪಿಸಿರುವಂತೆ ಪ್ರಭು ಭೋಜನ (ಮಾಸ್), ಸಪ್ತಸಂಸ್ಕಾರಗಳ (ಸ್ಯಾಕ್ರಮೆಂಟ್ಸ್) ಪ್ರದಾನ ಮತ್ತು ಅಧಿಕೃತ ಪ್ರಾರ್ಥನಾಪಠಣ-ಇವನ್ನು ಒಳಗೊಂಡಿರುವ ವಿಸ್ತಾರವಾದ ಆರಾಧನಾ ವಿಧಿಗೆ ಈ ಹೆಸರಿದೆ (ಲಿಟರ್ಜಿ). ಇದರ ಮುಖೇನ ಧರ್ಮಸಭೆ ಯೇಸುವಿನ ಗುರುತ್ವದ ಹಾಗೂ ರಕ್ಷಣಾ ಕಾರ್ಯದ ಫಲಗಳ ಉಪಯೋಗಗಳನ್ನು ಪಡೆಯುತ್ತದೆ. ಧಾರ್ಮಿಕ ಶ್ಲೋಕ-ಸೂತ್ರಗಳ ಉಚ್ಚಾರಣೆ, ಹಾವಭಾವಗಳ ವಿನ್ಯಾಸ, ಹಾಗೂ ಮತ್ತಿತರ ದೃಗ್ಗೋಚರ ಸಂಕೇತ ಮತ್ತು ಸಾಮಗ್ರಿಗಳು ಈ ವೇಳೆಯಲ್ಲಿ ಬಳಸಲ್ಪಡುತ್ತವೆ. ಧರ್ಮಸಭೆಯಿಂದ ಅಧಿಕೃತವಾಗಿ ನೇಮಿಸಲಾದ ಪುರೋಹಿತ ವರ್ಗದವರು ಆರಾಧನಾ ವಿಧಿಗಳನ್ನು ನಡೆಸಿಕೊಟ್ಟಾಗ ಮಾತ್ರ ಅದಕ್ಕೆ ಮನ್ನಣೆಯುಂಟು. ಶ್ಲೋಕ-ಸೂತ್ರಗಳು ಸಂಕೇತ ಸಾಮಗ್ರಿಗಳು ವ್ಯಕ್ತಿಯ ಅಂತರ್ಯದ ಭಕ್ತಿ ಭಾವವನ್ನು ಅಭಿವ್ಯಕ್ತಿಗೊಳಿಸಲು ಸಹಕಾರಿಯಾಗುತ್ತವೆ. ಈ ಮೂಲಕ ಕ್ರೈಸ್ತ ಜನತೆ ಭಗವಂತನಿಂದ ಪವಿತ್ರವಾಗುತ್ತದೆ; ಇವರ ಪ್ರೀತಿ ಅದರ ಮನ್ನಣೆ ಕೃತಜ್ಞತೆಗಳು ಭಗವಂತನಿಗೆ ಸಲ್ಲುತ್ತವೆ.

	ಪ್ರಭು ಭೋಜನದ (ನೋಡಿ) ವಿತರಣೆ ಆರಾಧನಾ ವಿಧಿಯ ಕೇಂದ್ರಬಿಂದು. ಈ ಕಾರ್ಯವನ್ನು ನೆರವೇರಿಸುವಾಗ ಪರಂಪರಾಗತವಾಗಿ ಅನೇಕ ಹೊಸವಿಧಿ ವಿಧಾನಗಳು ಸೇರಿಕೊಂಡಿವೆಯಾದರೂ ಪ್ರಧಾನ ಅಂಶಗಳಲ್ಲಿ ಯಾವ ಮಾರ್ಪಾಟೂ ಆಗಿಲ್ಲ.

	ಪುರೋಹಿತರು ದಿನಂಪ್ರತಿ ಹೇಳುವ ಪ್ರಾರ್ಥನೆಯೂ ಆರಾಧನಾ ವಿಧಿಯ ಅವಿಭಾಜ್ಯ ಅಂಗವೇ.

	ಆರಾಧನಾ ವಿಧಿಯಲ್ಲಿ ಅನೇಕ ಬಗೆಗಳಿವೆ. ಮೂಲತ: ನಾಲ್ಕು ವರ್ಗಗಳಿದ್ದುವು. 1 ಅಂಟಿಯೋಕನದು, 2 ಅಲೆಗ್ಸಾಂಡ್ರಿಯದ್ದು, 3 ರೋಮಿನದು, 4 ಪ್ರಾಚೀನ ಫ್ರಾನ್ಸಿನದು. ಅನಂತರ ಇವುಗಳಿಂದ ನಾನಾ ಬಗೆಗಳು ಕವಲೊಡೆದಿವೆ. ಸಿರಿಯನ್, ಸಿರೊ-ಮೆಸಪೊಟೇಮಿಯನ್, ಕಾಲ್ಡೀಯನ್, ಸಿರೊ-ಮಲಾರ್, ಬಿಜಾಂಟಿನ್, ಅರ್ಮೇನಿಯನ್, ಅಲೆಗ್ಸಾಂಡ್ರಿಯನ್, ಕಾಪ್ಟಿಕ್, ಈಥಿಯೋಪಿಯನ್-ಇತ್ಯಾದಿಗಳನ್ನು ಹೆಸರಿಸಬಹುದು.

	2ನೆಯ ವ್ಯಾಟಿಕನ್ ವಿಶ್ವ ಸಮ್ಮೇಳನ ಆರಾಧನಾ ವಿಧಿಯ ಬಗ್ಗೆ ಒಂದು ಮಹತ್ತ್ವ ಪೂರ್ಣ ಶಾಸನವನ್ನು ಹೊರಡಿಸಿ ಆರಾಧನಾ ವಿಧಿಯಲ್ಲಿ ಅಳಿದು ಹೋಗುತ್ತಿರುವ ಮೂಲದ ಅಂಶಗಳನ್ನು ಮತ್ತೆ ಆಚರಣೆಗೆ ತರುವ ಪ್ರಯತ್ನ ಮಾಡಿತು. ಅಲ್ಲದೆ ಭಾಷೆಯ ಸಂಕೇತ ಸಾಮಗ್ರಿಗಳ ಬಳಕೆಯಲ್ಲಿ ಪ್ರಾಂತೀಯ ಸಂಸ್ಕøತಿಗೆ ಪ್ರಾಶಸ್ತ್ಯ ಕೊಟ್ಟಿತು.

	ಈಗ ಭಾರತೀಯ ಕ್ರೈಸ್ತರು ಭಾರತೀಯ ಭಾಷೆಗಳಲ್ಲಿ ಅಲ್ಲಲ್ಲಿನ ಸಂಸ್ಕøತಿಗೆ ಅನುಗುಣವಾದ ರೀತಿಯಲ್ಲಿ ಆರಾಧನಾ ವಿಧಿಯನ್ನು ನಡೆಸುತ್ತಿದ್ದಾರೆ.  									(ಡಿ.ವಿ.ಡಬ್ಲ್ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ